ಕಾದಂಬರಿ ಸಂಗ್ರಹ

ಚಾಮರಾಜನಗರದಿಂದ ಪ್ರಕಟವಾಗುತ್ತಿದ್ದ ಮಾಸ ಪತ್ರಿಕೆ. ಸಿ. ವೆಂಕಟರಮಣಶಾಸ್ತ್ರಿಗಳ ಸಂಪಾದಕತ್ವದಲ್ಲಿ 1912ರಲ್ಲಿ ಪ್ರಾರಂಭವಾಯಿತು ಸಂಪಾದಕರ ಅನಾನುಕೂಲತೆಯಿಂದಾಗಿ ನಿಂತು ನಿಂತು, ಮತ್ತೆ ಮತ್ತೆ ಪ್ರಾರಂಭವಾಗುತ್ತಿತ್ತು. ಆದರೂ ಅದು ನಡೆದ ಅವಧಿಯಲ್ಲಿ ಸುಮಾರು 60 ಗ್ರಂಥಗಳು ಈ ಪತ್ರಿಕೆಯ ಮೂಲಕ ಬೆಳಕು ಕಂಡುವು.

 ಪತ್ರಿಕೆಯ ಹೆಸರು ಕಾದಂಬರಿ ಸಂಗ್ರಹವೆಂದಿದ್ದರೂ ಇದು ಕಾದಂಬರಿಗಳ ಜೊತೆಗೆ ಉಪನ್ಯಾಸ, ಗದ್ಯಪದ್ಯಾತ್ಮಕ ಲೇಖನ, ಮನೋರಂಜಕ ವಿಚಾರ, ನೈತಿಕ ಧಾರ್ಮಿಕ ವಿಷಯಕ ಲೇಖನ, ಕಥೆ, ಜೀವನ ಚರಿತ್ರೆ ಮುಂತಾದವನ್ನೂ ಪ್ರಕಟಿಸುತ್ತಿತ್ತು. ಸಂಪಾದಕರು ತಮ್ಮ ಸಂಚಾರವೊಂದರ ಬಗ್ಗೆ ಪ್ರಕಟಿಸಿರುವ ಸ್ವಾರಸ್ಯಕರವಾದ ವರದಿ ಆ ಕಾಲದ ಸಾರಿಗೆ ಸಂಪರ್ಕದ ವಿಶೇಷ ಅನುಭವಗಳಿಂದ ಕೂಡಿದ್ದಾಗಿದೆ. ವಿವಿಧ ವಿಷಯ ಪರಿಪೂರಿತವಾಗಿಯೂ ಲೋಕಾನಂದದಾಯಕವಾಗಿಯೂ ಇರುವ ಮನೋರಂಜಕ ಮಾಸಪತ್ರಿಕೆ ಎಂದು ಸಂಪಾದಕರೇ ತಮ್ಮ ಪತ್ರಿಕೆಯ ಬಗ್ಗೆ ಹೇಳಿಕೊಂಡಿದ್ದಾರೆ. ಭಾಷಾಸೇವೆಯ ಸಲುವಾಗಿಯೇ ಈ ಮಾಸಪತ್ರಿಕೆಯನ್ನು ಪ್ರಕಟಿಸುತ್ತಿರುವುದಾಗಿ ಇನ್ನೊಂದೆಡೆಯಲ್ಲಿ ಹೇಳಲಾಗಿದೆ. ಪುಟಸಂಖ್ಯೆಯನ್ನು ಒಟ್ಟಿನಲ್ಲಿ ಅನುಕ್ರಮವಾಗಿ ಪ್ರಕಟಿಸದೆ ಆಯಾ ಗ್ರಂಥಗಳ ಪುಟಸಂಖ್ಯೆಗಳನ್ನು ಅವಿಚ್ಛಿನ್ನವಾಗಿ ಸಂಚಿಕೆಯಿಂದ ಸಂಚಿಕೆಗೆ ಮುಂದುವರಿಸಿಕೊಂಡು ಹೋಗಲಾಗಿದೆ. 

 ರಾಯಲ್ ಆಕಾರದ 36 ಪುಟಗಳ ಸಂಚಿಕೆಯಾಗಿ ಇದು ಪ್ರಕಟವಾಗುತ್ತಿತ್ತು. ವಾರ್ಷಿಕ ಚಂದಾ: 1-8-0 ರೂ. ; ಪೋಷಕರಿಗೆ-5 ರೂ. 1938, ರವರೆಗೆ ಪ್ರಕಟವಾಯಿತು. ಮುಂದೆ 'ಆರ್ಯಧರ್ಮ ಸಂಗ್ರಹ' ಎಂದು ಹೆಸರು ಬದಲಿಸಿತು. 

           

(ಎಸ್.ವಿ.ಪಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ